ಅಪರಾಧ ತನಿಖೆಯಲ್ಲಿ ವೇ ಬ್ಯಾಕ್ ಮೇಷಿನ್ (Wayback Machine) ನ ಬಳಕೆ ಹೇಗೆ?
ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ ಪೊಲೀಸ್ ಹಾಗೂ ಇತರೆ ತನಿಖಾ ಸಂಸ್ಥೆಗಳು ಪ್ರಕರಣಗಳ ತನಿಖೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬರುತ್ತದೆ. ಆ ಸಮಸ್ಯೆಗಳಲ್ಲಿ ಕೆಲವೊಂದನ್ನು ಬಗೆಹರಿಸಲು ಈ ಪ್ರಯತ್ನ ಮಾಡಲಾಗಿದೆ. ಸೈಬರ್ ಜಗತ್ತು ವೈವಿದ್ಯಮಯವಾದುದು. ಅದು ನಿಂತ ನೀರಲ್ಲ, ನಿರಂತರವಾಗಿ ಬದಲಾಗುತ್ತಿರುತ್ತದೆ. ಯಾವುದೇ ಸಾಮಾಜಿಕ ಜಾಲತಾಣದ ಅಕೌಂಟ್ ಆಗಲಿ ಅಥವಾ ಯಾವುದೇ ವೆಬ್ ಸೈಟ್ ಆಗಲೀ ಹಳೆಯ ಪೋಸ್ಟ್ ಗಳು, ಫೋಟೋಗಳು ಅಥವಾ ಲೇಖನಗಳು ಡಿಲೀಟ್ ಆಗುತ್ತವೆ ಹಾಗೂ ಹೊಸ ವಿಷಯಗಳು ಅಪ್ ಲೋಡ್ ಆಗುತ್ತವೆ. ಆದ್ದರಿಂದ ಈ ಹಿಂದೆ ಬದಲಾವಣೆಯಾಗಿರುವ ಅಥವಾ ಡಿಲೀಟ್ ಆಗಿರುವ ಮಾಹಿತಿಯನ್ನು ಕಲೆ ಹಾಕುವುದು ಬಹಳ ಮುಖ್ಯ. ಹಾಗಾಗಿ ಜಾಲತಾಣದ ಐತಿಹಾಸಿಕ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಈ ಪ್ರಯತ್ನ..
ಈ ಉದ್ದೇಶಕ್ಕೆ ಈ ಕೆಳಗಿನ ವೆಬ್ ಸೈಟ್ ಗಳನ್ನು ಬಳಸಬಹುದು. ಅವುಗಳಲ್ಲಿ ಮೊದಲನೆಯದು ಬಹಳ ಮುಖ್ಯವಾದ ವೆಬ್ ಸೈಟ್;
- Wayback Machine - Internet Archive
- Archive.Today or Archive.Today
- Google Cached Pages
- Cached Pages
- Oldweb.Today
- Lumen Database
- Time Travel
ಈ ಮೇಲಿನವುಗಳಲ್ಲಿ ಮೊದಲನೆಯದು, ಅಂದರೆ Wayback Machine - Internet Archive ತನಿಖೆಯಲ್ಲಿ ಹೆಚ್ಚು ಉಪಕಾರಿಯಾದುದು.
ಪ್ರಕರಣಗಳ ತನಿಖೆಯಲ್ಲಿ ಇದನ್ನು ಎರಡು ಉದ್ದೇಶಗಳಿಗೆ ಬಳಸಬಹುದು; ಒಂದು ಪ್ರಕರಣದಲ್ಲಿ ಸಾಕ್ಷಿಯನ್ನು ಸಂಗ್ರಹಿಸಲು, ಎರಡನೆಯದು ಆರೋಪಿಯನ್ನು ಗುರುತಿಸಲು ಅಥವಾ ಪತ್ತೆ ಮಾಡಲು. ಈ ಎರಡರಲ್ಲೂ ಕೆಲವೊಂದು ಉದಾಹರಣೆಗಳನ್ನು ನೋಡೋಣ.
ಪ್ರಕರಣದಲ್ಲಿ ಸಾಕ್ಷಿಯನ್ನು ಸಂಗ್ರಹಿಸುವುದು :
- ಆರೋಪಿ/ಸಂತ್ರಸ್ತ/ಸಾಕ್ಷಿದಾರರು ಫೇಸ್ ಬುಕ್ /ಟ್ವಿಟ್ಟರ್/ಯೂಟ್ಯೂಬ್ ಹಾಗೂ ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಲ್ಲಿ ಅಥವಾ ಆಮೇಲೆ ಎಡಿಟ್ ಮಾಡಿದ್ದಲ್ಲಿ ಅಂತಹ ಮಾಹಿತಿಯನ್ನು ಪಡೆಯಬಹುದು.
- ಯಾವುದೇ ಬ್ಲಾಗ್ ಅಥವಾ ವೆಬ್ ಸೈಟ್ ನಲ್ಲಿ ಯಾವುದೇ ಲೇಖನ ಅಥವಾ ಇತರೆ ಮಾಹಿತಿ ಅಪ್ ಲೋಡ್ ಆಗಿದ್ದು, ಆಮೇಲೆ ಡಿಲೀಟ್ ಅಥವಾ ಎಡಿಟ್ ಅಥವಾ ಅಪ್ ಡೇಟ್ ಆಗಿದ್ದಲ್ಲಿ ಅಂತಹ ಮೂಲ/ಹಳೆಯ ಮಾಹಿತಿಯನ್ನು ಪಡೆದು ಸಾಕ್ಷಿಯಾಗಿ ಬಳಸಬಹುದು.
- ಜಾಲತಾಣದಲ್ಲಿ ಯಾವುದೇ ವೆಬ್ ಸೈಟ್ ಕೆಲವು ವರ್ಷಗಳ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ಈಗ ಕ್ಲೋಸ್ ಆಗಿದ್ದಲ್ಲಿ ಅಂತಹ ಪೇಜ್ ಗಳನ್ನು ನೋಡಿ ಸಾಕ್ಷಿ ಸಂಗ್ರಹಿಸಬಹುದು.
ಈ ಮೇಲಿನ ಸಂದರ್ಭಗಳಲ್ಲಿ ಅಗತ್ಯವಿರುವ ಮಾಹಿತಿ/ಸಾಕ್ಷ್ಯ ಸಂಗ್ರಹಿಸುವುದುರ ಜೊತೆಗೆ ಸಂಬಂದಿಸಿದ ಸಾಮಾಜಿಕ ಜಲತಾಣದ/ಡೊಮೈನ್ (domain) ನ ಕಂಪೆನಿಗೆ ಸಿ.ಆರ್.ಪಿ.ಸಿ. (CrPC) ಅಡಿಯಲ್ಲಿ ನೋಟಿಸ್ ನೀಡಿ ಅಧಿಕೃತ ಮಾಹಿತಿ ಪಡೆಯಲು ಪ್ರಯತ್ನಿಸಬೇಕು.
ಆರೋಪಿಯನ್ನು ಪತ್ತೆ ಮಾಡುವುದು :
- ಕೆಲವೊಂದು ಸೈಬರ್ ಪ್ರಕರಣಗಳಲ್ಲಿ ಆರೋಪಿಗಳು ಪದೇ ಪದೇ ಹೆಸರು ಬದಲಾಯಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಹಳೆಯ ಹೆಸರು ಅಥವಾ ಇತರೆ ಮಾಹಿತಿ ಪಡೆಯಬಹುದು.
- ಹೆಚ್ಚಾಗಿ ಫೇಸ್ ಬುಕ್, ಓ.ಎಲ್.ಎಕ್ಸ್. ಅಥವಾ ವೈವಾಹಿಕ ಜಾಲತಾಣಗಳಲ್ಲಿ ಕ್ರಿಮಿನಲ್ ಗಳು ಒಂದೇ ಅಕೌಂಟ್ ನಲ್ಲಿ ಪದೇ ಪದೇ ಹೆಸರು ಬದಲಾಯಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಾರೆ. ಅಂತಹ ವ್ಯಕ್ತಿಗಳ ಹಳೆಯ ಮಾಹಿತಿಗಳನ್ನು ನೋಡಬಹುದು.
- ಕೆಲವೊಂದು ಆರೋಪಿಗಳು ಅವರ ವೈಯಕ್ತಿಕ ಮಾಹಿತಿ ಡಿಲೀಟ್ ಮಾಡಿರಬಹುದು ಅಥವಾ ವೈಯಕ್ತಿಕ ಮಾಹಿತಿಯ ಸೆಟಿಂಗ್ಸ್ (privacy settiings) ಬದಲಾಯಿಸಿರಬಹುದು. ಅಂತಹ ಸಂದರ್ಭದಲ್ಲಿ ಅವರ ಎಕೌಂಟ್ ನ ಹಳೆಯ ಮಾಹಿತಿ ನೋಡಿದಲ್ಲಿ ಬಹು ಮುಖ್ಯ ಸುಳಿವು ಸಿಕ್ಕು ಆರೋಪಿಯನ್ನು ಗುರುತಿಸಲು ಅಥವಾ ಪತ್ತೆ ಮಾಡಲು ಸಹಾಯವಾಗಬಹುದು.
- ಕೆಲವೊಂದು ಕ್ರಿಮಿನಲ್ ಗ್ಯಾಂಗ್ ಗಳ ಬಗ್ಗೆ ಹಾಗೂ ಅವರ ಗ್ಯಾಂಗ್ ನ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಬಹುದು.
ಈ ಮೇಲಿನ ಸಂದರ್ಭಗಳಲ್ಲದೆ ಇನ್ನೂ ಹಲವಾರು ವಿಧಗಳಲ್ಲಿ ಈ Wayback Machine ಪೊಲೀಸರಿಗೆ ಸಹಕಾರಿಯಾಗಲಿದೆ. ಇನ್ನು ಇದನ್ನು ಬಳಸುವುದು ಹೇಗೆ ಎಂದು ನೋಡೋಣ.
ಸಾಮಾಜಿಕ ಜಾಲತಾಣಗಳ ಮಾಹಿತಿ:
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಡಿಲೀಟ್ ಅಥವಾ ಎಡಿಟ್ ಮಾಡಿರೋ ಮಾಹಿತಿ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಈ ಕೆಳಗಿನಂತೆ ಮಾಹಿತಿ ಸಂಗ್ರಹಿಸಬಹುದು;
1) ವೆಬ್ ಸೈಟ್ https://archive.org/web/ ಗೆ ಹೋಗಿ
2) ಅಲ್ಲಿ ವೆಬ್ ಸೈಟ್ ನ ಸರ್ಚ್ ಬಾಕ್ಸ್ ನಲ್ಲಿ ಯಾವ ಅಕೌಂಟ್ ನ ಮಾಹಿತಿ ಬೇಕಾಗಿದೆಯೋ ಅದರ URL ನ್ನು ಟೈಪ್ ಮಾಡಿ ಅಥವಾ ಪೇಸ್ಟ್ ಮಾಡಿ. ನಂತರ Enter ಒತ್ತಿ.
ಉದಾಹರಣೆಗೆ ಸಿನಿಮಾ ನಟ ಯಶ್ ರವರ ಟ್ವಿಟ್ಟರ್ ಖಾತೆಯ ಹಳೆಯ ಮಾಹಿತಿ ತೆಗೆಯೊಣ. ಅವರ ಟ್ವಿಟರ್ ಯು.ಆರ್.ಎಲ್. (url) ಲಿಂಕ್ ಅನ್ನು ಕಾಪಿ ಮಾಡಿ ಸರ್ಚ್ ಬಾಕ್ಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಕೀಯನ್ನು ಒತ್ತಿ.
https://web.archive.org/web/*/https://twitter.com/thenameisyash
3) ಆ ಅಕೌಂಟ್ ನ ದಿನವಾರು ಮಾಹಿತಿಯ ಪಟ್ಟಿ ಲಬ್ಯವಾಗುವುದು. ಆವುಗಳಲ್ಲಿ ಯಾವ ದಿನದ ಮಾಹಿತಿ ಬೇಕಾಗಿದೆ ಆ ದಿನವನ್ನು ಕ್ಲಿಕ್ ಮಾಡಿ.
https://web.archive.org/web/*/https://twitter.com/thenameisyash
4) ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ. ನಿಮಗೆ ಬೇಕಾದಂತೆ ದಿನಾಂಕಗಳನ್ನು ಬದಲಿಸಿ ವಿವಿದ ದಿನಾಂಕಗಳಂದು ಎಕೌಂಟ್ ನಲ್ಲಿ ಯಾವ ಮಾಹಿತಿ ಲಭ್ಯವಿದ್ದವು ಎಂದು ನೋಡಬಹುದು.
https://web.archive.org/web/20181222165803if_/https://twitter.com/thenameisyash
ಅದೇ ರೀತಿ ಫೇಸ್ ಬುಕ್ ಗೆ ಸಂಬಂದಿಸಿದ ಮಾಹಿತಿ ಸಹಾ ಪಡೆಯಬಹುದು. ಉದಾಹರಣೆಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ನ ಎಕೌಂಟ್ ನಲ್ಲಿ 2012 ನೇ ವರ್ಷ ಡಿಸೆಂಬರ್ 15 ನೇ ತಾರೀಕು ಯಾವ ಪೋಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಪಡೆಯಲು ಈ ಕೆಳಗಿನಂತೆ ಸರ್ಚ್ ಮಾಡಬಹುದು.
https://web.archive.org/web/20121215005520/https://www.facebook.com/BangaloreTrafficPolice
ಅದೇ ರೀತಿ ಯೂಟ್ಯೂಬ್ ನಲ್ಲೂ ಸಹ ಹಿಂದಿನ ಮಾಹಿತಿಯನ್ನು ಇದೇ ರೀತಿ ಪಡೆಯಬಹುದು. ಉದಾಹರಣೆಗೆ ಟಿ ಸಿರೀಸ್ ಯುಟ್ಯೂಬ್ ಚಾನಲ್ ನಲ್ಲಿ 2016 ನೇ ವರ್ಷ ಜೂನ್ 27 ಕ್ಕೆ ಯಾವ ಮಾಹಿತಿ ಇತ್ತು ಎಂದು ನೋಡಬಹುದು.
https://web.archive.org/web/20160627183011/https://www.youtube.com/user/tseries
ಇದೇ ರೀತಿ ಇನ್ಸ್ಟಾಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲೂ ಇದನ್ನು ಬಳಸಿಕೊಳ್ಳಬಹುದು.
ವೆಬ್ ಸೈಟ್ ಗಳ ಮಾಹಿತಿ :
ಈ ಮೇಲೆ ತಿಳಿಸಿದಂತೆ ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದ ವಿಧಾನದಲ್ಲಿಯೇ ಬೇರೆ ಬೇರೆ ವೆಬ್ ಸೈಟ್ ಗಳಿಂದ ಸಹಾ ಮಾಹಿತಿಯನ್ನು ಪಡೆಯಬಹುದು.
ಉದಾಹರಣೆಗೆ:
- ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್ 2008ನೇ ವರ್ಷ ಹೇಗಿತ್ತು ಎಂದು ನೋಡುವುದಾದರೆ-
https://web.archive.org/web/20080907200618/https://www.ksp.gov.in/
- ಉದಯವಾಣಿ ಪತ್ರಿಕೆಯ ವೆಬ್ ಸೈಟ್ ನಲ್ಲಿ 06.06.2012 ರಂದು ಯಾವ ವರದಿಗಳು ಪ್ರಕಟವಾಗಿದ್ದವು ಎಂದು ನೋಡಲು-
https://web.archive.org/web/20120606001538/http://www.udayavani.com/Kannada
- ಯು.ಬಿ. ಗ್ರೂಪ್ ಕಂಪನಿಯ 2013 ರಲ್ಲಿನ ಮಾಹಿತಿ ಅದರ ವೆಬ್ ಸೈಟ್ ನಿಂದ ಪಡೆಯುವುದಾದರೆ-
https://web.archive.org/web/20130529200825/http://theubgroup.com/finance_quarterly_main.aspx
ಹಲವು ಸಂದರ್ಭಗಳಲ್ಲಿ ಅಪರಾದವೆಸಗಿದ ನಂತರ ಕ್ರಿಮಿನಲ್ ಗಳು ಸಾಕ್ಷಿಯನ್ನು ಮರೆಮಾಚಲು ಹಲವು ಪ್ರಯತ್ನ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ವೆಬ್ ಸೈಟ್ ಗಳು ಬಹಳ ಉಪಕಾರಿಯಾಗಿ ಸಾಬೀತಾಗುತ್ತವೆ.
Posted on 15 May 21 By KA Forensics
✉ [email protected]
Follow @hello4n6